🐕 ಬೀದಿ ನಾಯಿಗಳ ಕಥೆ… ಸಮಾಜದ ಕನ್ನಡಿ

 

ಮೊದಲು ಮನುಷ್ಯ ತನ್ನ ರಕ್ಷಣೆ ಮತ್ತು ಬೇಟೆಗಾಗಿ ನಾಯಿಗಳನ್ನು ಸಾಕುತ್ತಿದ್ದ.

ಅವುಗಳಿಗೆ ಬೇಟೆಯ ಗುಣ ಇತ್ತು. ಕ್ರೂರತೆ ಇತ್ತು. ನಿಯತ್ತು ಇತ್ತು. ಸ್ವಾಭಿಮಾನ ಇತ್ತು.

ನಂತರ ಬೇಟೆ ನಿರ್ಬಂಧಕ್ಕೆ ಒಳಪಟ್ಟಿತು.


ಕೆಲವು ದಿನ ಸಾಕಲಾಯಿತು.

ದಿನ ಕಳೆದಂತೆ ಅವುಗಳು ಹೊರೆಯಾಗಲಾರಂಭಿಸಿದವು.

ಅಂತಿಮವಾಗಿ ಅವುಗಳೇ “ಬೀದಿ ನಾಯಿಗಳಾದವು”.


ಸಾಕಿದ ನಾಯಿಗಳಿಗೆ ಮೊದಲು ಮಾಂಸ.

ನಂತರ ವಾರಕ್ಕೆ ಎರಡು ದಿನ ಮಾಂಸ — ಉಳಿದ ದಿನ ಅನ್ನ ಸಾರು ಹಾಕಲಾಯಿತು.

ನಾಯಿ ಯೋಚಿಸಿತು: “ಮಾಡೋಕೆ ಏನು ಕೆಲಸ ಇಲ್ಲ, ಸಿಗ್ತಾ ಇದೆ ಅಂದ್ರೆ ಸಾಕು.”

ಹೀಗೆ ತನ್ನ ಬೇಟೆಗಾರ ಗುಣ ಕಳೆದುಕೊಂಡಿತು.

ಸಾಕಿದವನ ಮೇಲೆ ಸಂಪೂರ್ಣ ನಿರ್ಭರತೆ.

ನಂತರ ಸಂಪೂರ್ಣ ಅನ್ನ ಸಾರು.

ಆದರೂ ಸೈ.

ತನ್ನ ಅಸ್ತಿತ್ವವೇ ಮರೆತು

ಸಾಕಿದವನ ದಯೆಯ ಮೇಲೆ ಬದುಕು.

ಒಂದು ದಿನ ಅವನಿಗೆ ತಾತ್ಸಾರ ಬಂತು,

ಅಷ್ಟೋ ಇಷ್ಟೋ ಆಹಾರ ಹಾಕಿದ.

ಅದಕ್ಕೂ ಸೈ.

ಕೊನೆಗೆ ಬೀದಿಗೆ ಅಟ್ಟಿಬಿಟ್ಟ.

ಗೇಟ್ ಮುಂದೆ ಬಂದಾಗ ಚೂರು ರೊಟ್ಟಿ.

ಹೀಗೆ ಅದು “ಬೀದಿ ನಾಯಿ ಆಯಿತು”.


ಮುಂದಿನ ಪೀಳಿಗೆ?

ಮೂಲ ಅಸ್ತಿತ್ವದ ಬೀಜವಲ್ಲ.

ಗುಲಾಮಗಿರಿಯ ಬೀಜ.

ಯಾರಾದರೂ ಆಹಾರ ಹಾಕಿದರೆ ಬಾಲ ಅಲ್ಲಾಡಿಸುವುದು.

ಎಂಜಲು, ಹಳಸಿದ ಆಹಾರಕ್ಕೂ ಹಿಂದೆ ಓಡುವುದು.

ಹಸಿವಿಗಾಗಿ ಕಾದಾಡುವುದು.

ಆದರೂ ಹಿಂದೆ ತಿಂದ ಅನ್ನದ ಋಣಕ್ಕೆ ನಿಯತ್ತು.

ತನ್ನನ್ನು ತಾತ್ಸಾರ ಮಾಡಿದವನಿಗಾಗಿ ಹೋರಾಟ.


ಇತ್ತ ಸಾಕಿದ ಮನುಷ್ಯ?

ಪಾಶ್ಚಿಮಾತ್ಯ ಜಾತಿಯ ನಾಯಿಗಳ ಹಿಂದೆ ಓಡುತ್ತಾನೆ.

ಹೊಸ ತಳಿಗಳು ಮನೆಯಲ್ಲಿ.

ದೇಶಿ ತಳಿಗಳು ಬೀದಿಯಲ್ಲಿ.


ಈಗ ಸಮಾಜಕ್ಕೆ ಬರೋಣ

ನಮ್ಮ ದೇಶದ ಚುನಾವಣೆಗಳಲ್ಲಿ ಏನು ಕಾಣುತ್ತದೆ?


ದುಡ್ಡು ಕೊಟ್ಟರೆ ವೋಟ್.

ಎಣ್ಣೆ ಕೊಟ್ಟರೆ ವೋಟ್.

ಪುಕ್ಸಟ್ಟೆ ರೇಷನ್ ಕೊಟ್ಟರೆ ವೋಟ್.

ಪುಕ್ಸಟ್ಟೆ ಕರೆಂಟ್ ಕೊಟ್ಟರೆ ವೋಟ್.

ಪುಕ್ಸಟ್ಟೆ ಬಸ್ ಕೊಟ್ಟರೆ ವೋಟ್.

ಏನು ಪುಕ್ಸಟ್ಟೆ ಕೊಟ್ಟರೂ ವೋಟ್.


ಸ್ವಾಭಿಮಾನ?

ಸ್ವಾವಲಂಬನೆ?

ನಿಸ್ವಾರ್ಥ ದೇಶ ಸೇವೆ?


ಅನ್ನ ಕೊಟ್ಟ ದಣಿಗೆ ನಿಯತ್ತು.

ಆಮಿಷ ಒಡ್ಡಿದರೆ ಸಾಕು —

ಬಾಲ ಅಲ್ಲಾಡಿಸುವ ಸಮಾಜ.

ಇದರಿಂದ ಏನಾಗುತ್ತದೆ?


ತನ್ನನ್ನೇ ಗುಲಾಮನಾಗಿಸಿಕೊಳ್ಳುವುದು.

ತನ್ನ ಮಕ್ಕಳನ್ನೂ ಅವಲಂಬಿತ ಪೀಳಿಗೆ ಮಾಡುವುದು.

ಮುಂದಿನ ಪೀಳಿಗೆಗೂ ಗುಲಾಮಗಿರಿಯ ಬೀಜ ಬಿತ್ತುವುದು.


ಆದರೆ ಇಲ್ಲಿ ಒಂದು ಪ್ರಶ್ನೆ

ನಾವು ಹಸಿವಿಗಾಗಿ ಮತ ಹಾಕುತ್ತೀವಾ?


ಅಥವಾ ಭವಿಷ್ಯಕ್ಕಾಗಿ?

ಇವತ್ತು ಸಿಗೋದು ನೋಡುತ್ತೀವಾ?


ಅಥವಾ ನಾಳೆ ನಿರ್ಮಾಣವಾಗೋದು?


ಆಮಿಷಕ್ಕೆ ಮತ ಹಾಕಿದ ಸಮಾಜ

ಎಂದಿಗೂ ದಯೆಯ ಮೇಲೆ ಬದುಕುತ್ತದೆ.


ಆಲೋಚಿಸಿ ಮತ ಹಾಕಿದ ಸಮಾಜ

ಸ್ವಾಭಿಮಾನದಿಂದ ಬದುಕುತ್ತದೆ.


ಭವಿಷ್ಯ ರೂಪಿಸಬೇಕಾದರೆ

ಉಚಿತದ ಆಮಿಷಕ್ಕೆ ಬಲಿಯಾಗಬೇಡಿ.


ಕೆಲಸದ ದಾಖಲೆ ನೋಡಿ ಮತ ಹಾಕಿ.


ಶಿಕ್ಷಣ, ಉದ್ಯೋಗ, ಆರೋಗ್ಯ ಬಗ್ಗೆ ಪ್ರಶ್ನೆ ಕೇಳಿ.


ನಾಯಕರನ್ನು ಪ್ರಶ್ನಿಸುವ ಧೈರ್ಯ ಬೆಳೆಸಿ.


ಸ್ವಾವಲಂಬನೆಯ ಸಮಾಜ ಕಟ್ಟಲು ಯೋಚಿಸಿ.


ಒಂದು ಮತ

ಒಂದು ಪೀಳಿಗೆ ರೂಪಿಸಬಹುದು.

ಬಾಲ ಅಲ್ಲಾಡಿಸುವ ಸಮಾಜವಾಗಬೇಕಾ?

ಅಥವಾ ತಲೆ ಎತ್ತಿ ನಿಲ್ಲುವ ಸಮಾಜವಾಗಬೇಕಾ?

ನಿರ್ಧಾರ ನಿಮ್ಮದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾಪಿ ಕ್ಯಾಟ್.

ಸಮಾಜ ಮನುಷ್ಯ ದೇಹದ ಪರಿಕಲ್ಪನೆ

ಡಿಜಿಟಲ್ ವಿರಾಮ