ಡಿಜಿಟಲ್ ವಿರಾಮ
ರಾತ್ರಿ ಇಂಟರ್ನೆಟ್ ಒಂದು ಸಮಯದ ನಂತರ ಬಂದ್ ಆದರೆ ಏನಾಗಬಹುದು?
ಅಥವಾ ವಾರಕ್ಕೆ ಒಂದು ದಿನ ಸಂಪೂರ್ಣ ಡಿಜಿಟಲ್ ವಿರಾಮ ಇದ್ದರೆ ನಮ್ಮ ಜೀವನದಲ್ಲಿ ಏನು ಬದಲಾಗಬಹುದು?
ಮೊದಲು ಕೇಳಿದಾಗ ಈ ಪ್ರಶ್ನೆ ವಿಚಿತ್ರವಾಗಿ ಕಾಣಬಹುದು.
ಆದರೆ ಒಂದು ಕ್ಷಣ ಯೋಚಿಸಿ — ಇಂದಿನ ದಿನಗಳಲ್ಲಿ ನಾವು ಇಂಟರ್ನೆಟ್ ಅನ್ನು ಯಾವ ಕಾರಣಗಳಿಗೆ ಹೆಚ್ಚು ಬಳಸುತ್ತೇವೆ?
ಸುದ್ದಿ, ಸಾಮಾಜಿಕ ಜಾಲತಾಣ, ವಿಡಿಯೋ, ಮನರಂಜನೆ, ಚಾಟ್, ಕೆಲಸ, ವ್ಯಾಪಾರ, ಖರೀದಿ, ಶಿಕ್ಷಣ…
ಈ ಪಟ್ಟಿಗೆ ಕೊನೆ ಇಲ್ಲ.
ಇವುಗಳಲ್ಲಿ ಅನೇಕವು ನಮ್ಮ ಜೀವನಕ್ಕೆ ಸಹಾಯ ಮಾಡುತ್ತವೆ. ಆದರೆ ಇದೇ ವ್ಯವಸ್ಥೆ ನಿಧಾನವಾಗಿ ನಮ್ಮ ಜೀವನದ ಸಮಯ, ಗಮನ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ.
ಹಿಂದೆ ಮನುಷ್ಯನ ದೇಹ ಹೆಚ್ಚು ದಣಿಯುತ್ತಿತ್ತು.
ಇಂದು ದಣಿಯುತ್ತಿರುವುದು ಮನುಷ್ಯನ ಮನಸ್ಸು ಮತ್ತು ಮೆದುಳು.
ನಿರಂತರ ಮಾಹಿತಿ, ಡಿಜಿಟಲ್ ಪ್ರಭಾವ, ಸ್ಪರ್ಧೆ ಮತ್ತು 24 ಗಂಟೆಗಳ ಚಟುವಟಿಕೆಯ ಜೀವನ ಮನಸ್ಸಿಗೆ ವಿಶ್ರಾಂತಿ ನೀಡುವುದಿಲ್ಲ. ದಿನ ಮುಗಿದರೂ ಮೆದುಳು ಮುಗಿಯುವುದಿಲ್ಲ.
ಇಲ್ಲಿ ಒಂದು ಮೂಲ ಪ್ರಶ್ನೆ ಎದುರಾಗುತ್ತದೆ.
ಮನುಷ್ಯನ ಜೀವನ ಪ್ರಕೃತಿಯ ಲಯಕ್ಕೆ ಹೊಂದಿಕೊಂಡಿದೆಯೇ?
ಪ್ರಕೃತಿಯಲ್ಲಿ ಹಗಲು ಮತ್ತು ರಾತ್ರಿ ಎಂಬ ಸಮತೋಲನ ಇದೆ.
ಹಗಲು ಚಟುವಟಿಕೆ — ರಾತ್ರಿ ವಿಶ್ರಾಂತಿ.
ಆದರೆ ಇಂದಿನ ನಗರ ಜೀವನದಲ್ಲಿ ರಾತ್ರಿ ಕೂಡ ವ್ಯಾಪಾರ ನಡೆಯುತ್ತದೆ, ಅಂಗಡಿಗಳು ತೆರೆದಿರುತ್ತವೆ, ಮಾಹಿತಿ ಹರಿದುಕೊಂಡೇ ಇರುತ್ತದೆ. ನಿಧಾನವಾಗಿ ಸಮಾಜವೇ 24 ಗಂಟೆಗಳ ಯಾಂತ್ರಿಕ ಚಕ್ರ ಆಗುತ್ತಿದೆ.
ಇದರಿಂದ ಪರಿಣಾಮ ಕೇವಲ ವ್ಯಕ್ತಿಯ ಮೇಲೆ ಮಾತ್ರವಲ್ಲ, ಇನ್ನೂ ಹಲವಾರು ಮಟ್ಟಗಳಲ್ಲಿ ಕಾಣಿಸಿಕೊಳ್ಳುತ್ತದೆ:
• ಮನುಷ್ಯನ ಮಾನಸಿಕ ಆರೋಗ್ಯ
• ಕುಟುಂಬದ ಜೊತೆ ಕಳೆಯುವ ಸಮಯ
• ಸಮಾಜದ ಸಮತೋಲನ
• ಪ್ರಕೃತಿಯ ಪರಿಸರ ವ್ಯವಸ್ಥೆ
• ಇತರ ಜೀವರಾಶಿಗಳ ಜೀವನಚಕ್ರ
ಇನ್ನೊಂದು ಪ್ರಶ್ನೆಯೂ ಇದೆ.
ಆರ್ಥಿಕ ಶಕ್ತಿ, ಸಂಪತ್ತು ಮತ್ತು ಮಾಹಿತಿ ವ್ಯವಸ್ಥೆಗಳು ಕೆಲವು ಕೇಂದ್ರಗಳಲ್ಲಿ ಕೇಂದ್ರೀಕರಿಸಿದಾಗ, ಸಮಾಜದ ಗಮನವನ್ನು ಬೇರೆ ಕಡೆ ತಿರುಗಿಸುವ ವ್ಯವಸ್ಥೆಗಳೂ ಬೆಳೆಯುತ್ತವೆ. ನಿರಂತರ ಮಾಹಿತಿ ಮತ್ತು ಪ್ರಭಾವದ ನಡುವೆ ಮನುಷ್ಯನ ಮನಸ್ಸು ಸುಲಭವಾಗಿ ಪ್ರಭಾವಕ್ಕೆ ಒಳಗಾಗುತ್ತದೆ.
ಇಂದು ಸುಮಾರು 98% ಜನರು ತಮ್ಮ ದಿನನಿತ್ಯದ ಜೀವನದ ಹೋರಾಟದಲ್ಲೇ ತೊಡಗಿಕೊಂಡಿದ್ದಾರೆ. ಅವರಿಗೆ ಈ ದೊಡ್ಡ ವ್ಯವಸ್ಥೆಯ ಪರಿಣಾಮಗಳ ಬಗ್ಗೆ ಯೋಚಿಸಲು ಸಮಯವೇ ಸಿಗುವುದಿಲ್ಲ.
ಆದ್ದರಿಂದ ಕೆಲವೊಮ್ಮೆ ಸರಳ ಪ್ರಶ್ನೆಗಳು ಕೇಳುವುದು ಅಗತ್ಯ.
ಪ್ರಕೃತಿ ನಿಯಮದ ಪ್ರಕಾರ ರಾತ್ರಿ ವಿಶ್ರಾಂತಿ ಇದ್ದರೆ, ದಿನದ ಕೆಲಸವನ್ನು ಬೇಗ ಆರಂಭಿಸಲು ಸಾಧ್ಯವಿಲ್ಲವೇ?
• ಶಾಲೆಗಳು ಬೆಳಿಗ್ಗೆ 7 ಗಂಟೆಗೆ ಆರಂಭವಾಗಬಹುದು
• ಬ್ಯಾಂಕ್ ಮತ್ತು ಕಚೇರಿಗಳು ಬೆಳಿಗ್ಗೆ 7 ಗಂಟೆಗೆ ಆರಂಭವಾಗಬಹುದು
• ಜನರು ತಮ್ಮ ಅಗತ್ಯ ಕೆಲಸಗಳನ್ನು ಹಗಲಲ್ಲೇ ಮುಗಿಸಬಹುದು
ರಾತ್ರಿ ಅನಿವಾರ್ಯ ಸೇವೆಗಳು (ಆಸ್ಪತ್ರೆ, ತುರ್ತು ಸೇವೆಗಳು) ಮಾತ್ರ ಕಾರ್ಯನಿರ್ವಹಿಸಬಹುದು. ಆದರೆ ವ್ಯಾಪಾರ ಮತ್ತು ಅನವಶ್ಯಕ ಚಟುವಟಿಕೆಗಳನ್ನು ಸಮಯದ ಮಿತಿಯೊಳಗೆ ಕಟ್ಟಿಹಾಕಬಹುದು.
ಇದು ಕೇವಲ ನಿಯಂತ್ರಣದ ಪ್ರಶ್ನೆಯಲ್ಲ.
ಇದು ಮಾನಸಿಕ ಆರೋಗ್ಯ ಮತ್ತು ಪ್ರಕೃತಿಯ ಸಮತೋಲನದ ಪ್ರಶ್ನೆ.
ಮನುಷ್ಯ ರಾತ್ರಿ ಮಲಗುವ ಮೊದಲು ತನ್ನ ಮನಸ್ಸಿಗೆ ಯಾವ ರೀತಿಯ ಆಲೋಚನೆಗಳ ಆಹಾರ ಕೊಡುತ್ತಾನೋ ಅದು ಅವನ ನಿದ್ರೆಯಲ್ಲೂ ಮತ್ತು ಮುಂದಿನ ದಿನದ ಮನಸ್ಥಿತಿಯಲ್ಲೂ ಪರಿಣಾಮ ಬೀರುತ್ತದೆ.
ಮನುಷ್ಯನಲ್ಲಿ ಸ್ವನಿಯಂತ್ರಣದ ಒಂದು ಸಹಜ ವ್ಯವಸ್ಥೆ ಇದ್ದರೂ ಅವನ ಮನಸ್ಸು ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತದೆ. ಆ ಪ್ರಭಾವ ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು.
ಇಂದಿನ ದಿನಗಳಲ್ಲಿ ಹರಡುತ್ತಿರುವ ನಕಾರಾತ್ಮಕ ವಿಷಯಗಳು ಮತ್ತು ನಿರಂತರ ಮಾಹಿತಿಯ ಒತ್ತಡ ಜನರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಇದು ನಿಧಾನವಾಗಿ ಸಮಾಜದ ಉತ್ಪಾದಕತೆಯ ಮೇಲೂ ಮತ್ತು ದೇಶದ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದ್ದರಿಂದ ಈ ಪ್ರಶ್ನೆ ಮತ್ತೆ ಎದುರಾಗುತ್ತದೆ:
ತಂತ್ರಜ್ಞಾನ ಮತ್ತು ಪ್ರಗತಿಯ ಜೊತೆಗೆ ಪ್ರಕೃತಿಯ ಲಯವನ್ನು ಹೇಗೆ ಉಳಿಸಿಕೊಳ್ಳಬಹುದು?
ಇದು ಕೇವಲ ಸರ್ಕಾರದ ಪ್ರಶ್ನೆಯಲ್ಲ.
ಇದು ಸಮಾಜವಾಗಿ ನಾವು ಎಲ್ಲರೂ ಯೋಚಿಸಬೇಕಾದ ಪ್ರಶ್ನೆ.
ನಿಮ್ಮ ಅಭಿಪ್ರಾಯವೇನು?
ರಾತ್ರಿ ಡಿಜಿಟಲ್ ವಿರಾಮ ಅಥವಾ ಸಮಯದ ಮಿತಿಯಂತಹ ಚಿಂತನೆಗಳು ಸಮಾಜದ ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡಬಹುದೇ?
ಇದನ್ನು ನೇರವಾಗಿ ದೇಶದ ಮಟ್ಟದಲ್ಲಿ ಜಾರಿಗೆ ತರುವುದಕ್ಕಿಂತ ಮೊದಲು ಒಂದು ಪ್ರಯೋಗವಾಗಿ ಆರಂಭಿಸಬಹುದೇ?
ಉದಾಹರಣೆಗೆ, ಸವಾಲುಗಳು ಕಡಿಮೆ ಇರುವ ಕೆಲವು ಸಣ್ಣ ನಗರಗಳು, ಜಿಲ್ಲೆಗಳು ಅಥವಾ ರಾಜ್ಯಗಳಲ್ಲಿ ಈ ರೀತಿಯ ಡಿಜಿಟಲ್ ವಿರಾಮ ಅಥವಾ ರಾತ್ರಿ ಚಟುವಟಿಕೆಗಳ ಸಮಯದ ಮಿತಿಯನ್ನು ಪ್ರಯೋಗವಾಗಿ ಜಾರಿಗೆ ತರಬಹುದು.
ಅಲ್ಲಿ ಅದರ ಪರಿಣಾಮಗಳನ್ನು ಗಮನಿಸಬಹುದು:
ಜನರ ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಇದೆಯೇ?
ನಿದ್ರೆ ಮತ್ತು ಜೀವನಶೈಲಿಯಲ್ಲಿ ಸುಧಾರಣೆ ಆಗುತ್ತಿದೆಯೇ?
ಕುಟುಂಬದ ಜೊತೆ ಸಮಯ ಹೆಚ್ಚುತ್ತಿದೆಯೇ?
ಸಮಾಜದ ಉತ್ಪಾದಕತೆ ಅಥವಾ ಶಿಸ್ತು ಮೇಲೆ ಏನು ಪರಿಣಾಮ ಬೀರುತ್ತದೆ?
ಈ ರೀತಿಯ ಪ್ರಯೋಗದಿಂದ ಸ್ಪಷ್ಟವಾದ ಮಾಹಿತಿ ಸಿಕ್ಕ ನಂತರ ಮಾತ್ರ ಅದನ್ನು ಬೇರೆ ನಗರಗಳು ಅಥವಾ ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಬಗ್ಗೆ ಯೋಚಿಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ