ಒಗ್ಗಟಿನಲ್ಲಿ ಶಕ್ತಿ ಪ್ರಾಮಾಣಿಕತೆಯಲ್ಲಿ ಭವಿಷ್ಯ
ಮೊದಲು ಅವರು ನಮ್ಮ ಗ್ರಾಹಕರು… ನಂತರ ಅವರೇ ನಮ್ಮ ಗ್ರಾಹಕರಾಗುತ್ತಾರೆ ಸಣ್ಣ ಪಟ್ಟಣಗಳ ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪಾರದರ್ಶಕತೆ, ಪರಸ್ಪರ ಸಹಕಾರ ಹಾಗೂ ಸುರಕ್ಷಿತ ವ್ಯವಹಾರದ ಅಗತ್ಯ ಯಲ್ಲಾಪುರ ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಅನೇಕ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಲ್ಲಿಯೂ ಒಂದೇ ರೀತಿಯ ಪರಿಸ್ಥಿತಿ ಕಾಣಿಸುತ್ತದೆ. ದೊಡ್ಡ ನಗರಗಳಿಗೆ ಹೋಲಿಸಿದರೆ ಇಲ್ಲಿ ಮಾರುಕಟ್ಟೆಯ ವ್ಯಾಪ್ತಿ ಚಿಕ್ಕದು. ಬೇರೆ ಊರುಗಳೊಂದಿಗೆ ವ್ಯವಹಾರಿಕ ಸಂಪರ್ಕವೂ ಸೀಮಿತ. ಜನಸಂಖ್ಯೆ ಕಡಿಮೆ, ಗ್ರಾಹಕರ ಸಂಖ್ಯೆ ಸೀಮಿತ ಮತ್ತು ಒಂದೇ ಉದ್ಯೋಗ ಅಥವಾ ವ್ಯಾಪಾರವನ್ನು ಅವಲಂಬಿಸಿರುವವರ ಸಂಖ್ಯೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಒಂದು ದೊಡ್ಡ ಸವಾಲು ಎದುರಾಗುತ್ತದೆ—“ನಾವು ದುಡಿದ ಹಣ ಸಮಯಕ್ಕೆ ನಮ್ಮ ಕೈಗೆ ಬರುತ್ತದೆಯೇ?” ದುಡಿಯುವುದು ಒಂದು ಸಮಸ್ಯೆಯಲ್ಲ. ಕೆಲಸ ಸಿಗುವುದೂ ಕೆಲವೊಮ್ಮೆ ಸಮಸ್ಯೆಯಲ್ಲ. ಆದರೆ ಕೆಲಸ ಮಾಡಿದ ನಂತರ ಅದರ ಹಣವನ್ನು ಸಮಯಕ್ಕೆ ಪಡೆಯುವುದು ಇಂದು ಅನೇಕ ಸಣ್ಣ ವ್ಯಾಪಾರಿಗಳು, ಕಾರ್ಮಿಕರು, ಗುತ್ತಿಗೆದಾರರು ಮತ್ತು ಸೇವಾ ವೃತ್ತಿಯಲ್ಲಿರುವವರಿಗೆ ದೊಡ್ಡ ಸವಾಲಾಗಿದೆ. ಸಮಸ್ಯೆ ಎಲ್ಲಿದೆ? ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ವಯಸ್ಸಿನ ನಂತರ ತನ್ನ ಜೀವನೋಪಾಯಕ್ಕಾಗಿ ಯಾವುದಾದರೂ ಕೆಲಸ ಅಥವಾ ವ್ಯಾಪಾರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಯಾರೋ ಪೇಂಟರ್. ಯಾರೋ ಎಲೆಕ್ಟ್ರಿಷಿಯನ್. ಯಾರೋ ಪ್ಲಂಬರ್. ಯಾರ...