ಮನಸ್ಸು ಖಾಲಿಯಾದಾಗ ಆತ್ಮ ಮಾತನಾಡುತ್ತದೆ


✍️ ಬರವಣಿಗೆ… 

ಮನಸ್ಸನ್ನು ಖಾಲಿ ಮಾಡುವ ಕ್ರಾಂತಿ

ಬರವಣಿಗೆ.


ನೀವು ಏನು ಬರೀತೀರಿ ಅನ್ನೋದು ಮುಖ್ಯವಲ್ಲ.

ಅದರಲ್ಲೇನು ಅರ್ಥವಿದೆಯೋ ಇಲ್ಲವೋ ಅದು ಕೂಡ ಮುಖ್ಯವಲ್ಲ.

ಯಾರು ಓದುತ್ತಾರೋ ಇಲ್ಲವೋ — ಅದೂ ಮುಖ್ಯವಲ್ಲ.


ಮುಖ್ಯವಾದುದು — ನೀವು ಬರೆಯುತ್ತೀರಾ ಇಲ್ಲವಾ ಎನ್ನುವುದು.

ಮನುಷ್ಯನ ಜೀವನ ಒಂದು ನಿರಂತರ ಪ್ರವಾಹ.


ಪ್ರತಿ ದಿನ ಅನೇಕ ಅನುಭವಗಳು, ಅನೇಕ ಭಾವನೆಗಳು, ಅನೇಕ ಯೋಚನೆಗಳು — ಮನಸ್ಸಿನ ಒಳಗೆ ಸೇರುತ್ತಲೇ ಇರುತ್ತವೆ.

ನಾವು ಮೊಬೈಲ್ ಬಳಸುವಂತೆ —

ಅದರಲ್ಲೂ ಡೇಟಾ ಸೇರುತ್ತದೆ.

ಕ್ಯಾಶ ತುಂಬುತ್ತದೆ.

ಮೆಮೊರಿ ಫುಲ್ ಆಗುತ್ತದೆ.

ಆಗ ನಾವು ಏನು ಮಾಡುತ್ತೇವೆ?

ಕ್ಲೀನ್ ಮಾಡುತ್ತೇವೆ.

ರಿಸ್ಟಾರ್ಟ್ ಮಾಡುತ್ತೇವೆ.


         ಆದರೆ ಮನಸ್ಸು?

ಮನಸ್ಸನ್ನು ನಾವು ಯಾವಾಗ ಕ್ಲೀನ್ ಮಾಡುತ್ತೇವೆ?

ಖುಷಿ ಬಂದಾಗ ಅದನ್ನು ಮನಸ್ಸಿನಲ್ಲಿ ಸಂಗ್ರಹಿಸುತ್ತೇವೆ.

ದುಃಖ ಬಂದಾಗ ಅದನ್ನು ಒಳಗೆ ತಳ್ಳಿಬಿಡುತ್ತೇವೆ.

ಆದರೆ ಎರಡೂ ಶಾಶ್ವತವಲ್ಲ.

ಖುಷಿ ಹೂವಿನ ವಾಸನೆಯಂತೆ — ಕ್ಷಣಿಕ.

ದುಃಖ ಒದ್ದೆಯಾದ ಮಣ್ಣಿನ ಗುಡ್ಡೆಯಂತೆ — ಬೇಗ ಒಣಗುವುದಿಲ್ಲ.


ದುಃಖ ಹೆಚ್ಚು ಕಾಲ ಉಳಿಯುವುದಕ್ಕೆ ಒಂದು ಸೂಕ್ಷ್ಮ ಕಾರಣ ಇದೆ.

ಜಗತ್ತಿನಲ್ಲಿ ಸಂತೃಪ್ತರಾಗಿರುವವರಿಗಿಂತ ಅತೃಪ್ತರಾಗಿರುವವರ ಸಂಖ್ಯೆ ಹೆಚ್ಚು.

ಅತೃಪ್ತಿ ಹೋಲಿಕೆಯಿಂದ ಹುಟ್ಟುತ್ತದೆ.

ಹಂಬಲದಿಂದ ಹುಟ್ಟುತ್ತದೆ.

ಇಲ್ಲದ್ದನ್ನು ಬಯಸುವ ಮನಸ್ಥಿತಿಯಿಂದ ಹುಟ್ಟುತ್ತದೆ. ಸಿ.ಅಶ್ವಥ್ ಅವರು " ಕಾಣದ ಕಡಲಿಗೆ ಹಂಬಲಿಸಿದೆ ಮನ" ಹೀಗೆ ಹಾಡುವಂತೆ,

ಮನುಷ್ಯ ಯಾವಾಗಲೂ ಕಾಣದ ಕಡಲಿನತ್ತ ಓಡುತ್ತಾನೆ.


ತನ್ನ ಸುತ್ತಲಿರುವ ಸಣ್ಣ ಸಂತೋಷಗಳನ್ನು ಕಡೆಗಣಿಸಿ, ಇನ್ನೂ ದೊಡ್ಡ ಸಂತೋಷದ ಹುಡುಕಾಟದಲ್ಲಿ ತಾನು ಹೊಂದಿರುವ ಶಾಂತಿಯನ್ನು ಕಳೆದುಕೊಳ್ಳುತ್ತಾನೆ.


ಇರುವದನ್ನು ಬಿಟ್ಟನು.

ಇಲ್ಲದ್ದನ್ನು ಪಡೆಯಲಿಲ್ಲ.

ಮತ್ತೆ ದುಃಖದ ಬಾಗಿಲಿಗೆ ಬಂದು ನಿಂತನು.


ಅದಕ್ಕೇ ಡಿ.ವಿ.ಜಿ. ಅವರು ಹೇಳುತ್ತಾರೆ:

“ಬಾರೆನೆಂಬುದನ್ನು ಬಿಟ್ಟು ಇರುವ ಭಾಗ್ಯವ ನೆನೆಯೋ ಮನುಜ”.


ಕೃತಜ್ಞತೆ ಇಲ್ಲದ ಮನಸ್ಸು ಎಂದಿಗೂ ಶಾಂತವಾಗುವುದಿಲ್ಲ.

ದುಃಖ ಹೊರ ಹೋಗಲು ಜಾಗ ಹುಡುಕುತ್ತದೆ.

ಮನಸ್ಸು ಖಾಲಿ ಇಲ್ಲದಿದ್ದರೆ ಅದು ಅಲ್ಲಿ ನೆಲೆಸುತ್ತದೆ.

ಮನಸ್ಸಿನಲ್ಲಿ ಈಗಾಗಲೇ ದುಃಖ ತುಂಬಿದರೆ — ಮತ್ತೊಂದು ದುಃಖ ಬರುವುದಕ್ಕೆ ಅದು ಸಿದ್ಧವಾಗಿರುತ್ತದೆ.


ಆದ್ದರಿಂದ — ಬರೆಯಿರಿ.

ಬರೆಯುವುದು ದುಃಖವನ್ನು ಉಳಿಸುವುದು ಅಲ್ಲ.

ಅದಕ್ಕೆ ರೆಕ್ಕೆಗಳನ್ನು ಕೊಡುವುದು.

ಮನಸ್ಸಿನೊಳಗೆ ಸುತ್ತಾಡುವ ಭಾವನೆಗಳಿಗೆ ಕಾಗದದ ಮೇಲೆ ರೂಪ ಸಿಕ್ಕಾಗ — ಅವು ನಿಧಾನವಾಗಿ ನಿಮ್ಮೊಳಗಿಂದ ಹೊರ ಹೋಗುತ್ತವೆ.

ಬರಹ ಒಂದು ಔಷಧಿ.

ಒಂದು ಶುದ್ಧೀಕರಣ.

ಒಂದು ಮೌನ ಕ್ರಾಂತಿ.

ನಿದ್ರೆ ಹೇಗೆ ದೇಹಕ್ಕೆ ರೀಬೂಟ್ ಆಗುತ್ತದೋ,

ಧ್ಯಾನ ಹೇಗೆ ಆತ್ಮದ ಸಂಪರ್ಕವೋ,

ಹಾಗೆಯೇ ಬರವಣಿಗೆ ಮನಸ್ಸಿನ ರೀಸೆಟ್.


ಬರೆಯುವವನು ತನ್ನ ಜೀವನವನ್ನು ನೋಡಲು ಪ್ರಾರಂಭಿಸುತ್ತಾನೆ.

ಬರೆಯದವನು ತನ್ನ ಜೀವನದಲ್ಲಿ ಸಿಕ್ಕಿಬೀಳುತ್ತಾನೆ.

ಮನಸ್ಸು ಯಾವಾಗ ಖಾಲಿಯಾಗುತ್ತದೋ —

ಆಗ ಹೊಸ ಬೆಳಕು ಒಳಬರಲು ಜಾಗ ಸಿಗುತ್ತದೆ.

ಮನುಷ್ಯ ತನ್ನ ಜೀವನದಲ್ಲಿ ಯಾವ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಾನೋ, ಅವೇ ಅವನ ಯೋಚನೆಗಳನ್ನು ರೂಪಿಸುತ್ತವೆ.

ಯೋಚನೆಗಳು ನಿರ್ಣಯವಾಗುತ್ತವೆ.

ನಿರ್ಣಯಗಳು ಜೀವನದ ದಿಕ್ಕಾಗುತ್ತವೆ.


ಮೊಬೈಲ್‌ನಲ್ಲಿ ನಾವು ಯಾವ ಅಪ್ಲಿಕೇಶನ್ ಬಳಸುತ್ತೇವೋ ಅದೇ ನಮ್ಮ ಡೇಟಾವನ್ನು ರೂಪಿಸುವಂತೆ —

ಮನಸ್ಸಿನಲ್ಲಿ ನಾವು ಯಾವ ವಿಚಾರಗಳನ್ನು ಪೋಷಿಸುತ್ತೇವೋ ಅವೇ ನಮ್ಮ ಭವಿಷ್ಯವನ್ನು ರೂಪಿಸುತ್ತವೆ.

ಆದ್ದರಿಂದ —

ಬರೆಯಿರಿ.

ಮನಸ್ಸು ತುಂಬಿದಾಗ ಬರೆಯಿರಿ.

ಮನಸ್ಸು ಖಾಲಿಯಾಗಿದ್ದರೂ ಬರೆಯಿರಿ.

ಖುಷಿ ಬಂದಾಗ ಬರೆಯಿರಿ.

ದುಃಖ ಬಂದಾಗ ಇನ್ನೂ ಹೆಚ್ಚು ಬರೆಯಿರಿ.


ಬರೆಯುವುದರಿಂದ

ಮನಸ್ಸು ಹಗುರವಾಗುತ್ತದೆ.

ಅತೃಪ್ತಿ ಕಡಿಮೆಯಾಗುತ್ತದೆ.

ಕೃತಜ್ಞತೆ ಬೆಳೆಯುತ್ತದೆ.

ಆತ್ಮದ ಧ್ವನಿ ಸ್ಪಷ್ಟವಾಗುತ್ತದೆ.


ಜೀವನವನ್ನು ಅರ್ಥಮಾಡಿಕೊಳ್ಳಲು ಮೊದಲು ಅದನ್ನು ಗಮನಿಸಬೇಕು.

ಗಮನಿಸಲು ಮೊದಲು ಅದನ್ನು ಬರೆಯಬೇಕು.

ಬರೆದು ಬಿಡಿ.

ಬರೆದು ಹೊರಹಾಕಿ.

ಬರೆದು ಮುಕ್ತವಾಗಿರಿ.

✍️

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾಪಿ ಕ್ಯಾಟ್.

ಸಮಾಜ ಮನುಷ್ಯ ದೇಹದ ಪರಿಕಲ್ಪನೆ

ಡಿಜಿಟಲ್ ವಿರಾಮ